Friday, July 6, 2007

ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

..ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ ಹೊರಡುತ್ತೇವೆ. ಅದೇನು ಕಡಿದಾದ ಬೆಟ್ಟದ ಕಷ್ಟಸಾಧ್ಯ ಚಾರಣವೇ ಆಗಬೇಕಿಲ್ಲ. ಎಲ್ಲಿ ಸರಳ ದಿನಚರಿಯ, ಹಸಿರ ನೆರಳೋ ಅಲ್ಲಿಗೆ ನಾವು.. ಒಂದು ದೀರ್ಘ ಪ್ರಯಾಣ, ಬೆಳಗಾ ಮುಂಚೆಯ ಬಸ್ ಸ್ಟಾಂಡ್ ಹೋಟೆಲಿನ ಗಬ್ಬು ಆದರೆ ಬಿಸಿಯಾದ ಕಾಫಿ, ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಶಟ್ಲಿನಲ್ಲಿ, ಎದ್ದೆದ್ದು ಹಾರಿ ಕೂರುತ್ತ, ಊರಿಂದ ದೂರಾಗಿ ಮನೆಯಲ್ಲೇ ಊರಿರುವ ಹಳ್ಳಿಯ ತಪ್ಪಲು ಸೇರುವುದು ನಮ್ಮನ್ನು ಸದಾ ಹಿಡಿದಿಟ್ಟ ಆಕರ್ಷಣೆ.. ಅಲ್ಲಿ ಬೆಟ್ಟವಿದ್ದರೆ, ದಟ್ಟ ಕಾನಿದ್ದರೆ, ಜಲಪಾತವಿದ್ದರೆ ಮುಗಿದೇ ಹೋಯಿತು.. ಹೋಗಲೇಬೇಕು.. ಮಳೆಯಾ, ಬಿಸಿಲಾ, ಚಳಿಯಾ ಅದೇನಡ್ದಿಲ್ಲ ಬಿಡಿ, ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?! ಅದಿರಲಿ, ಚಳಿಯಲ್ಲಿ ನಡುಕ ಬರುವಾಗ, ಕಾಲಿಗೆ ಸಾಕ್ಸ್ ಹಾಕಿ, ಬೆಚ್ಚನೆ ಸ್ವೆಟರ್, ಟೋಪಿ ಧರಿಸಿ ಕೂತು ಚಳಿಯನ್ನೇ ಸಿಪ್ ಮಾಡುವ ಮಜಾ.. ಬಿಸಿಲಲ್ಲಿ ಬೆವರಿಳಿದು, ಉಸಿರು ಭಾರವಾಗಿ, ಉಪ್ಪುಪ್ಪು ಬೆವರು ಕಣ್ಣಿಗಿಳಿದು ಉರಿಯಾಗಿ, ಬೆನ್ನ ಹೊರೆಯನ್ನ ಹೊರಲಾರದೆ ಹೊತ್ತು ಆ ಬೆಟ್ಟದ ತುದಿ ಸೇರಿ ಬೀಸಿ ಬರುವ ತಂಗಾಳಿಗೆ ಒಪ್ಪಿಸಿಕೊಂಡು, ಸುತ್ತಲ ಚಂದದಲ್ಲಿ ಮಾತು ಹೊರಡದೆ ಕೂತು ಹಗುರಾಗುವ ಕ್ಷಣದ ಖುಶಿ.. ಇದೆಲ್ಲದರ ಮುಂದೆ ಇನ್ನೇನಿದೆ..? ಅಬ್ಬಬ್ಬಾ ಅಂತ ಹಾಯಾಗಿ ಕೂತ ಕ್ಷಣದಲ್ಲಿ, ಇದನ್ನ ಇವತ್ತು ಇಷ್ಟೊತ್ತಿಗೆ ಮುಗಿಸಿ ರಿಪೋರ್ಟ್ ಕಳಿಸಬೇಕು ಎನ್ನುವ ಧಾವಂತವಿಲ್ಲ.. ಅಲ್ಲದೆ, ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣಗಳಲ್ಲಿ ಎಲ್ಲ ಖಾಲಿಯಾಗಿ ಮತ್ತೆ ಎಲ್ಲ ತುಂಬಿಕೊಂಡ ಅದ್ವೈತ ಭಾವ..

ಹಾಗೇ ಕಳೆದ ವಾರ ನಾವು ನಾಲ್ವರು ಮುತ್ತೋಡಿ - ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ಹೊರಟೆವು.. ತುಂಬು ಮಳೆ, ಚಂದ ಕಾಡು, ಅಲ್ಲಲ್ಲಿ ಹೊಳವಾದಾಗ ಮರದಿಂದ ಮರಕ್ಕೆ ಉಲಿಯುತ್ತ ಹಾರುವ ಥರಾವರಿ ಹಕ್ಕಿಗಳು.. ನೆಂದು ಹೊಳೆವ ಹಸಿರ ಜೀವಗಳು..ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು.. ಸೋರುತ್ತಿದ್ದ ಕಾಟೇಜುಗಳು, ನೀಟಾಗಿ ಆಹ್ವಾನಿಸುತ್ತಿದ್ದ ಜಗುಲಿಯ ಮೇಲೆ ಬೆತ್ತದ ಖುರ್ಚಿಗಳು, ಯುನಿಫಾರ್ಮಿನ ಮೇಲೆ ಅರ್ಧ ತೋಳಿನ ಸ್ವೆಟರ್ ಹಾಕಿ, ತಲೆಗೆ ಮಳೆಟೊಪ್ಪಿಗೆ ಹಾಕಿದ ಫಾರೆಸ್ಟ್ ಆಫೀಸಿನವರು.., ಅಲ್ಲಿದ್ದ ಊಟದ ಮನೆಯಿಂದ ಬೆಚ್ಚಗೆ ಹೊರಹೋಗುತ್ತಿದ ಕಟ್ಟಿಗೆ ಒಲೆಯ ಹೊಗೆ, ಹೊಗೆ ಮಾತ್ರ ಯಾಕಮ್ಮ ನಾನೂ ಹೋಗ್ ಬೇಕ್ ಅಂತ ಮೈ ತುಂಬ ಸ್ವೆಟರ್ ತೊಟ್ಟ ಇನ್ನೂ ಮಾತು ಬರದ ಕಂದನೊಂದು ಹೊಸ್ತಿಲ ದಾಟಲು ಮಾಡುತ್ತಿರುವ ಕಸರತ್ತು, ಅಲ್ಲಿ ಸುತ್ತ ಬೆಳೆದಿದ್ದ ಹೂಗಿಡಗಳ ರಸಕುಡಿಯಲು ಮಳೆ ಕಡಿಮೆಯಾದ್ ಕೂಡಲೆ ಹಾರಿ ಬಂದು ಬಗ್ಗಿ ಕೂತು ಹೂವೊಳಗೆ ಕೊಕ್ಕಿಟ್ಟ ಪುಟಾಣಿ ಹಕ್ಕಿ.. ಯಾವ ರಸವನ್ನ ಸವಿಯುವುದು.. ಯಾವುದನ್ನ ಬಿಡುವುದು.. ಅಲ್ಲ ಬಿಡಲಿಕ್ಕೆ ಆದೀತಾ? ನೋಡುತ್ತ ನೋಡುತ್ತ ಸವಿಯುತ್ತ ನಾವು ಜಾರಿ ಹೋಗಿ ಮಾಯಾಲೋಕ ಸೇರಿದ್ದೆವು.. ನಾಳೆ ಊರಿಗೆ ವಾಪಸಾಗಲೇಬೇಕು ಎಂಬ ಎಚ್ಚರದ ಜಗುಲಿಯ ಮೇಲೆ ನಾವು ಆ ಚಂದದ ಜಾಗದ ಸೊಗದಲ್ಲಿ ನೇಯ್ದ ಮಾಯಾಚಾಪೆ ಹಾಸಿ ಕೂತಿದ್ದೆವು.. ನಮ್ಮ ತೇಲುವಿಕೆಯ ಸಮಗ್ರ ನೋಟವನ್ನು ಮತ್ತೆ ಕಟ್ಟಲು ಅಸಾಧ್ಯವಾದರೂ ಕೆಲ ಹಕ್ಕಿನೋಟಗಳನ್ನು ಹೇಗಾದರೂ ಮಾಡಿ ಬರೆದಿಟ್ಟು ಮತ್ತೆ ಮತ್ತೆ ಮೆಲುಕು ಹಾಕಬೇಕೆಂಬ ಸ್ವಾರ್ಥ...

ಪ್ರಕೃತಿಯ ಚಂದ ಮತ್ತು ಗಂಭೀರ ನಿಲುವನ್ನ ಪದರಪದರವಾಗಿ ಬಿಡಿಸಿಟ್ಟ ಹಾಗಿನ ಮುತ್ತೋಡಿ ಕಾಡು, ಚಿಕ್ಕಮಗಳೂರಿನಿಂದ ಸುಮಾರು ೪೦-೪೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಹೋಗುವಾಗ ಬಸ್ಸಲ್ಲಿ ಹೋದರೆ, ನಮಗೆ ಅಲ್ಲಿನ ಚಂದ ಕಾಡಿನ ಜೊತೆಗೆ, ಅಲ್ಲಿ ಹಳ್ಳಿಯಲ್ಲಿ ದುಡಿದು ಬದುಕುವ ಎತ್ತರದ ಜೀವಗಳ ಕಿರುನೋಟ ಸಿಕ್ಕೀತು. ಕಾಡೆಂದರೆ ಬರೀ ಕಾಡಲ್ಲ ಅಲ್ಲಿ ಕಾಡು, ಹಳ್ಳಿ, ದುಡಿಮೆ, ಕಷ್ಟ, ತಂಪು ಮಳೆ, ಏರು ತಗ್ಗಿನ ಹಾದಿ ಎಲ್ಲ ಸೇರಿದ ಬದುಕಿನ ಹಾಡು.. ನೋಡಲು ಚಣಕಾಲ ನಿಂತರೆ ಕೇಳಿಸೀತು.. ಇಂಗ್ಲಿಷ್ ಹೆಸರೊಂದರಲ್ಲಿ ಜನಪ್ರಿಯವಾದ ನಮ್ಮದೇ ಕಾಡಿನ ಬಣ್ಣದ ಹಕ್ಕಿಯನ್ನು ನೋಡುವ ನಿಶ್ಚಲ ರೀತಿಯಲ್ಲಿ, ಅಲುಗಾಡದೆ, ಅದರದ್ದೇ ಒಂದು ಭಾಗವಾಗಿ, ಅಲ್ಲಿನ ಹೊಂದಿಕೆ ಕೆಡಿಸದೆ, ನೋಡ ಹೊರಟರೆ ಕಣ್ಣಿಗೆ ಸಿಕ್ಕುವ ನೋಟಗಳು, ಬರೆದಿಡಲಾಗದ್ದು.. ಅಲ್ಲಲ್ಲಿ ಕಾಫಿ ಎಸ್ಟೇಟುಗಳು, ಸುರಿಮಳೆಯಲ್ಲೂ ಉಟ್ಟ ಸೀರೆಯ ಮೇಲೆ ತುಂಬು ತೋಳಿನ ದೊಗಲೆ ಅಂಗಿ, ಹಾಳೆ ಟೋಪಿ, ಬಿಗಿಯಾಗಿ ಹಿಡಿದ ಪುಟ್ಟಕತ್ತಿಯೊಡನೆ, ಬಸ್ಸು ಹತ್ತಿ ಮುಂದಿನೂರಿನ ಎಸ್ಟೇಟ್ ಕೆಲಸಕ್ಕೆ ಹೊರಟ ಹೆಂಗಳೆಯರನ್ನು ನೋಡಿ ನಾನು ಬೆರಗಾದೆ. ಬೆಚ್ಚಗೆ ಮನೆಯಲ್ಲೆದ್ದು, ಬಿಸಿನೀರು ಸ್ನಾನ ಮಾಡಿ, ಎಲ್ಲ ಒಳ್ಳೆಯ ಬೆಚ್ಚನೆ ಅಂಗಿ ಹಾಕಿ, ಮನೆ ಮುಂದೆ ಬರುವ ಕ್ಯಾಬ್ ಹತ್ತಿ ಎ.ಸಿ.ಆಫೀಸಿನ ಮುಂದೆ ಇಳಿಯುವ ಸೌಲಭ್ಯದಲ್ಲಿ ಇದಿಲ್ಲ ಅದಿಲ್ಲ ಅಂತ ಕೊಂಕು ತೆಗೆಯುವ ನಮ್ಮ ನಡವಳಿಕೆ ನೆನಪಾಗಿ ನಾಚಿಕೆಯಾಯಿತು. ಓಹ್ ಎಷ್ಟು ಕಷ್ಟ ಅಂತ ಅನುಕಂಪದ ನನ್ನ ನೋಟವನ್ನ ಕತ್ತರಿಸಿ ಬಿಸಾಕಿದ್ದು ನನ್ನ ಪಕ್ಕ ಕೂತ ಅವಳ ಜೋರುನಗೆ. ಅದು ಬಸ್ಸೆಲ್ಲ ಹರಡಿ, ಸುತ್ತ ನಿಂತ ಜೊತೆಗಾತಿಯರ ನಗುವಿನಲ್ಲಿ ಮಾರ್ದನಿಸಿ, ಕಂಡಕ್ಟರನ ಕೀಟಲೆಯಲ್ಲಿ ಮೊಗ್ಗೊಡೆದಿತ್ತು.. ಕಷ್ಟ ಈಚೆ ದಡದಲ್ಲಿ ನಿಂತವರಿಗೆ.. ಅನುಕೂಲಗಳು ಹುಟ್ಟಿದಾಗಿನಿಂದ ಅಭ್ಯಾಸವಾದವರಿಗೆ, ಆಚೆ ದಡದ ಅವರಿಗದು ಸಹಜ ಬದುಕು, ಅಲ್ಲೂ ನಗು, ಕೀಟಲೆ, ಸಮಾಧಾನ, ಪ್ರೀತಿಯ ಮೊಗ್ಗು, ಅಲ್ಲೊಂದು ಇಲ್ಲೊಂದು ಬಿಕ್ಕು, ಶೀತ ಜ್ವರ, ಕಂತ್ರಾಟುದಾರನ ಹತ್ತಿರ ಬೈಗುಳ.. ಎಲ್ಲ ಸಹಜವಾಗಿ.. ನಮ್ಮ ರಾಜಧಾನಿಯಲ್ಲಿ ನಡೆವಂತೆ ಇಲ್ಲಿ ಮೇಕಪ್ಪಿಲ್ಲ, ಬಿನ್ನಾಣವಿಲ್ಲ, ಸೋಗಿನ ಭಾವಪ್ರದರ್ಶನವಿಲ್ಲ... ಕಪ್ಪು ಮೋಡ, ತಂಪು ಮಳೆ, ಕುಳಿರು ಚಳಿ, ಚುರು ಚುರು ಬಿಸಿಲು, ಕಾಲಕ್ಕೆ ತಕ್ಕಂತೆ ಹೊಂದಿ ನಡೆವ, ಅಳಲೂ ನಗಲೂ ಹೊತ್ತು ಗೊತ್ತಿಲ್ಲದ ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

ನಾವು ಬಸ್ಸಿಳಿದು ಮುತ್ತೋಡಿ ಸೇರಿ ಹಕ್ಕಿಯ ಪ್ರಾರ್ಥನಾ ಗೀತೆಗೆ ತಲೆಯಾಡಿಸಿ, ಮಧ್ಯಾಹ್ನದ ಊಟವನ್ನು ಗೊತ್ತು ಮಾಡಿ ಅಲ್ಲಿ ಹೊಳೆಯಂಚಿನ ಕಾಟೇಜಿನ ಜಗುಲಿಯಲ್ಲಿ ಕೂತೆವು.. ಸೌಂದರ್ಯದ ಪ್ರತಿಫಲಿತ ಬಿಂಬಗಳು ಎಲ್ಲೆಲ್ಲೂ.. ಯಾವ ರಾಗಕ್ಕೂ ಸೇರದ ಮಧುರ ಉಲಿಗಳು ಸುತ್ತೆಲ್ಲೂ.. ಊಟವಾಗಿ ಮಳೆ ಕಡಿಮೆಯಾಗಿ, ನಾವು ಬೆಟ್ಟದ ಮೇಲಿನ ತಂಗುದಾಣಕ್ಕೆ ಹೊರಟೆವು.. ದಾರಿಯಲ್ಲಿ ಆನೆ ನಡೆದ(ದ್ದೇ) ದಾರಿ.. ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು.. ಯಾವ ಸೂಪರ್ ಮಾಲ್ ನ, ಫ್ಯಾಷನ್ ಡಿಸೈನರ್ ನೇಯಬಲ್ಲಳು ಇದನ್ನ?


ಬೆಟ್ಟದ ಮೇಲೆ ಒಂಟಿ ಮನೆಯಂತಹ ತಂಗುದಾಣ. ಕರೆಂಟಿಲ್ಲ, ಮೊಬೈಲ್ ಸಿಗ್ನಲ್ ಸಿಗುವುದಿಲ್ಲ.. :) ಬೆಚ್ಚನೆ ವರಾಂಡದಲ್ಲಿ ಹಾಕಿದ ಆರಾಮಕುರ್ಛಿಯಲ್ಲಿ ಕೂತು, ಉದ್ದುದ್ದ ಕಿಟಕಿಗಳ ಗಾಜಿನಿಂದ ಮಳೆಯ ಕುಣಿತ, ನೆಲದ ಜೀವಿಗಳ ಏರಿಳಿತ, ಸ್ಪಂದನಗಳನ್ನ ನೋಡುತ್ತಾ ಸಂಜೆ ಕಳೆದೆವು. ಮಳೆ ನಿಂತಾಗೆಲ್ಲ ಹಕ್ಕಿ ಹಾಡು.. ಮುಗಿಯುವಷ್ಟರಲ್ಲಿ ಮಳೆಯ ತಾನ.. ಯಾವ ಕಚೇರಿಯಲ್ಲೂ ಕೇಳಿರದ ಗಾನಸುಧೆ ಸವಿದೆವು. ಸೂರ್ಯನ್ನ ಯಾರಿಗೂ ಗೊತ್ತಾಗದ ಹಾಗೆ ಮನೆಗೆ ಕಳಿಸಿದ ಸಂಜೆ, ಇಂಚಿಂಚೇ ಕತ್ತಲೆಯನ್ನ ನಮ್ಮಂಗಳಕ್ಕೆ ದೂಡುತ್ತಿತ್ತು.. ನೋಡನೋಡುತ್ತ ಪೂರ್ತಿ ಆವರಿಸಿದ ಕತ್ತಲ ಚೆಲುವನ್ನ ಇಮ್ಮಡಿಸಲು ಮೋಡದ ಮರೆಯಲ್ಲೇ ಕೂತು ಕಿರ್‍ಅಣ ಹಾಯಿಸುವ ಚಂದ್ರ, ಇವತ್ತು ರಜಾ ಅಂತ ಕಣ್ಣಿಗೆ ಕಾಣದ ಹಾಗೆ ಬಾನಿನೂರಿನ ಮೋಡಮನೆಗಳಲ್ಲಿ ಬೆಚ್ಚಗೆ ಕೂತ ಚಿಕ್ಕೆರಾಶಿ.. ಕಂಡಿದ್ದು, ಕಾಣದ್ದು, ಕಾಣಬೇಕೆಂದು ಬಯಸಿದ್ದು, ಕಾಣಲಾಗದೆ ಹೋಗಿದ್ದು.. ಎಲ್ಲವೂ ತುಂಬ ಚಂದ ಇತ್ತು.. ಕತ್ತಲೆಯೇ ಆದ್ಮೇಲೆ ಇನ್ನೇನು ಅಂತ ನಗೆದೀಪದ ಕುಡಿ ಬೆಳಗಿದ ಗೆಳೆಯನಿಗೆ ಜೊತೆಯಾಗಿ ನಾವು ಮೂವರೂ ಜೋಕಿನ ಎಣ್ಣೆ ಸುರಿದು, ಸುತ್ತಲೂ ನಗೆಹಬ್ಬದ ಬೆಳಕಿನೋಕುಳಿ..
ಹಂಚಿನ ಮೇಲೆ ಬೋಲ್ ನುಡಿಸುವ ಮಳೆಯನ್ನು ಕೇಳುತ್ತಾ ರಾತ್ರಿ ಬೆಚ್ಚಗೆ ಮಲಗಿ, ಬೆಳಿಗ್ಗೆ ಏಳುವಾಗ, ಮೂಡಣದಲ್ಲಿ ಬೆಳಕಿನ ಘರಾನಾದ ಪೂರ್ವಿ ರಾಗ.. ನಾವೆನು ಕಡಿಮೆ ಅಂತ ಉಲಿದುಲಿದು ತೇಲುವ ಹಕ್ಕಿಗೊರಳಿನ ಪಹಾಡೀ.... ನೋಡುತ್ತ ನೋಡುತ್ತ ಪೂರ್ವಿ, ಕಲ್ಯಾಣಿಯಾಗಿ, ಮಲ್ಹಾರದ ಮಳೆ ಸುರಿದು, ನಾವು ರಾಗಗಳ ಅವರೋಹಣದಲ್ಲಿ ಸೇರಿ ಕೆಳಗೆ ಅರಣ್ಯ ಕಛೇರಿಗೆ ಇಳಿದು ಬಂದೆವು.. ಮತ್ತೆ ಕೆಲಸಮಯದಲ್ಲಿ ಸಹಜಯಾನದ ತುಂಗಾ ಎಕ್ಸ್ ಪ್ರೆಸ್, ಹತ್ತಿ ಕುಲುಕಾಡಿ, ಚಿಕ್ಕಮಗಳೂರಿನ ಗಿಜಿಗುಟ್ಟುವ ಬಸ್ ಸ್ಟಾಂಡಿಗೆ ಕಾಲಿಡುವಾಗ ಮಳೆ ನಿಂತು ಬಿಸಿಲೇರಿ, ಓಹ್ ಒಂದ್ಗಂಟೆಗೆ ಬಸ್ ಸಿಕ್ಕಿದ್ರೆ ಬೇಗ ಮನೆಗ್ ಹೋಗಿ, ಮಲಗೆದ್ದು ಬೆಳಿಗ್ಗೆ ಬೇಗ ಆಫೀಸಿಗೆ ಹೊರಟು ಆ ರಿಪೋರ್ಟ್ ಒಂದು ಮುಗಿಸ್ ಬಿಟ್ರೆ ಆಯ್ತಪ್ಪಾ .. ಎಲ್ಲ ರಾಗಗಳೂ ಕಳೆದು ಬೆಳಕಿನ ರಾಜಧಾನಿಯ ಝಗಮಗ, ಜೀವನಯೋಗ.. (ಜೀವನ ದೊಂಬರಾಟ ಅಂತ ಬರೆಯಬೇಕೆನ್ನಿಸಿತು.. ಹಾಗೆ ಬರೆದರೆ ಬರೆದ ಪ್ರಾಸಕ್ಕೆ ಮತ್ತು ಆದರಿಸಿ ತೆಕ್ಕೆಗೆಳೆದುಕೊಂಡ ಬದುಕಿನ ಪ್ರೀತಿಗೆ ಮೋಸವಾಗಬಹುದೆನ್ನಿಸಿ.. )

12 comments:

Shree said...

:) :) :) :) :) :) :) :) :) :) :) :) :) :) :) :) :) :) :) :) :) :) :) :)
MISSED IT...

Sushrutha Dodderi said...

>>ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?!

Even I missed it..!

VENU VINOD said...

ಗುಡ್ ಗುಡ್ ಅಂತೂ ನೀವೂ ಪ್ರಯಾಣ, ಚಾರಣಕ್ಕೆ ಫಿಟ್ ಅಂತ ತೋರಿಸಿಬಿಟ್ರಿ. :-)

ವಿಕ್ರಮ ಹತ್ವಾರ said...

"ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು.. ಯಾವ ಸೂಪರ್ ಮಾಲ್ ನ, ಫ್ಯಾಷನ್ ಡಿಸೈನರ್ ನೇಯಬಲ್ಲಳು ಇದನ್ನ?"

ಜೇಡರ ಬಲೆ, ಹಕ್ಕಿ ಗೂಡು, ಆರ್ಕಿಟೆಕ್ಟ್....ಅಮ್ಮನ ಮಾತು ನೆನಪಾಯಿತು.

ಜೀವನಯೋಗ ಅಂದದ್ದು ನೀವು ಯೋಚಿಸಿದ್ದಕ್ಕಿಂತಲೂ, ಎಲ್ಲಾ ರೀತಿಯಿಂದಲೂ ಹೊಂದಿಕೊಂಡಿತು ಅನ್ನಿಸಿತು. ಇಲ್ಲದೇ ಹೋಗಿದ್ದರೆ ಆ ಹೆಂಗಳೆಯರದ್ದು ಮಾತ್ರ ಸಹಜ ಯಾನದ ತುಂಗಾ ಎಕ್ಸ್ಪ್ರೆಸ್..

ರಾಜೇಶ್ ನಾಯ್ಕ said...

ಅಂತೂ ಕಡೆಗೆ ನಿಮ್ಮಿಂದ ಒಂದು ಪ್ರವಾಸ ಕಥನ ಬಂತು. ಎಲ್ಲೇ ಚಾರಣಕ್ಕೆ ಅಥವಾ ಪ್ರಯಾಣಕ್ಕೆ ಹೋದರೆ ಪ್ರಕೃತಿಯ ಜೊತೆ ಅಲ್ಲಿನ ಜನಜೀವನವನ್ನೂ ಗಮನಿಸಬೇಕು. ಹೆಚ್ಚಿನವರು ಬರೀ ಪ್ರಕೃತಿಯನ್ನು ಮಾತ್ರ ಆಸ್ವಾದಿಸಿ ಹಿಂತಿರುಗುತ್ತಾರೆ. ನೀವು ತುಂಗಾ ಎಕ್ಸ್ ಪ್ರೆಸ್ ನಲ್ಲಿ ಗಮನಿಸಿ ಬರೆದದ್ದು ಬಹಳ ಸಂತೋಷವನ್ನು ನೀಡಿತು.

ಮುತ್ತೋಡಿಯ ಕಾಡಿನ ವರ್ಣನೆ ಸುಂದರ. ಮಳೆಯಲ್ಲಿ ಚಾರಣ/ಪ್ರಯಾಣ ಮಾಡುವುದೇ ಒಂದು ಅಪೂರ್ವ ಅನುಭವ. ಅಲ್ಲಿ ಮೊಬೈಲ್ ಸಿಗ್ನಲ್ ಐಗುವುದಿಲ್ಲ ಎನ್ನುವುದು ಖುಷಿ ನೀಡಿತು.

Unknown said...

Fantastic work. Keep it up...

Unknown said...

ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣ
, ಗೆಳೆಯರ ಗುಂಪು and ಬಿಸಿಯಾದ ಕಾಫಿ.... Nostalgic about my "malenadina siri".
Good writing. Keep the flag of RVV (HSHS) Sagara high.

Satish said...

ಸಿಂಧು ಮೆಡಮ್ ಯಾಕ್ ಬರ್ದಿಲ್ಲಾ ಒಂದೆರಡು ದಿನಗಳಿಂದಾ ಅಂತ ಬಂದು ನೋಡಿದ್ರೆ ದೂರದಲ್ಲಿರೋ ನಮ್ಮ್ ಹೊಟ್ಟೇ ಉರಿಸೋ ಹುನ್ನಾರವನ್ನು ಹಾಕ್ಕೊಂಡಿರೋ ಗುಂಪಿಗೆ ನೀವು ಸೇರ್ಕೊಂಡಿರೋದು ಗೊತ್ತಾಯ್ತು! ನೀವು ನಿಮ್ಮೂರ್ ಬದಿ ವಾತಾವರಣಾನಾ ಇಷ್ಟೆಲ್ಲಾ ಚೆನ್ನಾಗಿ ಫೋಟೋ ಸಮೇತ ವಿವರಿಸ್ತಾ ಹೋದ್ರೆ ನಮ್ ಹೊಟ್ಟೇ ಉರಿಯೋದಂತೂ ನಿಜ, ಮಾಡ್ತೀನ್ ತಾಳಿ...ನಾನು ನಾಳೆಯಿಂದ ನ್ಯೂ ಯಾರ್ಕ್‌ನಲ್ಲಿರೋ ಮಜಮಜಾ ಚಿತ್ರಗಳನ್ನೆಲ್ಲ ಬ್ಲಾಗ್‌ನಲ್ಲಿ ಹಾಕ್ತೀನಿ...ನೋಡ್ತಾ ಇರಿ!

Ganesha Lingadahalli said...

ಮ್.... ಸಿಂಧು ಅಕ್ಕ, ನೀನೂ ಮುತ್ತೋಡಿಗೆ ಶರಣಾದೆ ಅಂತಾತು....
ನಂಗಂತೂ ಮತ್ತೊಂದ್ಸಲ ಹೋಪನಾ ಅನ್ನಿಸ್ತಾ ಇದ್ದು.... :)

ಶ್ರೀನಿಧಿ.ಡಿ.ಎಸ್ said...

ತಡಿ ಸಿಂಧು ಮಾಡಸ್ತಿ ನಿಂಗೆ.
ನಾನೂ ಚೊಲೋ ಚೊಲೋ ಜಾಗಕ್ ಹೋಗ್ ಬಂದು ಅಷ್ಟೂ ಕಥೆ ಪುರಾಣ ಬರ್ದು ನಿನ್ ತಲೆ ಹಾಳ್ ಮಾಡ್ದೇ ಹೋದ್ರೆ ನಾನು ಶ್ರೀನಿಧಿನೇ ಅಲ್ಲ!.

ಮತ್ ಬರಿಯದ್ ನೋಡು!
ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು..
ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು..

ಪುಣ್ಯಾತ್ ಗಿತ್ತೀ, ನಂಗೆ ಆಫೀಸಲ್ಲಿ ಸದ್ಯಕ್ಕಂತೂ ರಜೆ ಕೊಡದಿಲ್ಲೆ! " ಹೀಗೀಗೆ ಹೋಗಿ, ಬಂದೆವು, ಬಸ್ಸು- ಸಮಯ- ತಿಂಡಿ " ಹೀಂಗೆ ವರದಿ ಬರಿಯದು ಬಿಟ್ಟು! ಅಲ್ನೋಡು, ಮೆದುಳೆಲ್ಲ ಕರಗೇ ಹೋಯಕು ಆ ತರ ಬರದ್ದೆ! ಉಫ್!

ನಂದೂ ಕಾಲ ಬತ್ತು, ತಡ್ಕ!

ಸಿಂಧು sindhu said...

ಶ್ರೀ..
:( :(

ಸು,
:(

ವೇಣು..
ಧನ್ಯವಾದ. ಒಂದು ಪ್ರವಾಸಕಥನ ನನ್ನ ಫಿಟ್ ನೆಸ್ ತೋರಿಸಿದೆ..! ಆಶ್ಚರ್ಯ..! ನನಗೆ ಹಾಗನ್ನಿಸಿಲ್ಲ. ಹಲವು ಸಲ ಚಾರಣ ಮಾಡಿದ್ದರೂ ನನಗೆ ಹಾಗನ್ನಿಸಿಲ್ಲ.. ನನ್ನ ಜೊತೆಗೆ ಚಾರಣ ಮಾಡಿದವರಿಗೂ ನಾನು ಫಿಟ್ ಅನ್ನಿಸಿಲ್ಲ :D

ವಿಕ್ರಮ,
ಅವರ ಸಹಜಯಾನದಲ್ಲಿ ಭಾಗವಾಗಲು ನನಗೆ ಒಂದು ಸೀಟ್ ಸಿಕ್ಕಿದ್ದಕ್ಕೆ ಖುಷಿ..


ರಾಜೇಶ್,
ನಿಮ್ಮ ಚಾರಣದ ನದಿಯ ಮುಂದೆ ನನ್ನದು ಪುಟ್ಟ ಒರತೆ.. ಮುತ್ತೋಡಿ ಒಂದು ಅಪರೂಪದ ಜಾಗ.

ವೆಂಕಿ,
ಥ್ಯಾಂಕ್ಸ್. ಬಾವುಟ ಎತ್ತಿ ಹಿಡಿಯುವ ಕೆಲಸ ಕಷ್ಟಸಾಧ್ಯ...

ಸತೀಶ್,
ಸತ್ಯವಾಗ್ಲೂ ಹೊಟ್ಟೆ ಉರಿಸೋಕೆ ಬರ್ದಿದ್ದಲ್ಲ. ಆಗ್ಲಿ ಇದ್ರಿಂದ ಒಳ್ಳೊಳ್ಲೆ ಕಥನಗಳು ಹುಟ್ಟುವುದಾದರೆ ಅದೂ ಸಂತೋಷ.
ಹಾಕಿ ಹಾಕಿ..

ಗಣೇಶ್,
ಹಿಂದಿನ್ಸಲ ನೀವು ಹೋಗಿದ್ದನ್ನ ಓದಿದಾಗಿನಿಂದ ಕಾಯ್ತಾ ಇದ್ದಿದ್ದಿ. ಹೋದ್ಸಲ ಒಮ್ಮೆ ಅರ್ಧ ದಿನ ಹೋಗಿ ಬಂದಿದ್ಯ, ಉಳಕಂಡಿರಲ್ಲೆ. ತುಂಬ ಚೆನಾಗಿತ್ತು.

ಶ್ರೀನಿಧಿ,
ಬಯ್ಯಡ ಮಾರಾಯ.. ನಿನ್ನ ಉರ್ಲು ಬರಹವೊಂದೇ ಸಾಕು ನಾನು ಅಡ್ಡ ಬೀಳಲಿಕ್ಕೆ..
ನೀನು ಊರಲ್ಲಿ ಜುಂ ಅಂತ ವಾರ ಇದ್ಯಲ್ಲಾ ಮತ್ಯಾಕೆ ಸಿಟ್ಟು..
ತಡ್ಕಂಡಿದ್ದಿ.. ಬರಿ ಮಾರಾಯಾ.. ಓದಕ್ಕು..
ಇವತ್ತಿನ ಖುಷಿಯ ಪದ್ಯ(http://shree-lazyguy.blogspot.com/2007/07/blog-post.html) ಸೂಪರ್...

jagadeesh sampalli said...

Thanks Sindhu, you have taken me to my childhood days. Its not so easy to tell such experiences in words, one must experience it. Though we came from such a remote rural area in Malnad, we lost in concrete forests of cities. With that many a times we even lost experiencing and enjoying such moments.

Moreover, Sindhu I read your story in 'The Sunday Indian'. Its good.